ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಬೋಧ ಚಂದ್ರೋದಯ ರಾಗಾರುಣ ಜಾಲೆ
ಗಿರಿ ಸಿರಿ ಬನ ಸಂಚಾರಣೆ ತುಂಗಾಜಲ ನೀಲೆ
ದಲದಲದಲ ಮೆದು ಹಾಸಲಿ ಗಾನ ಸುಪ್ತ ಲೋಲೆ
ಈ ಸುಮಧುರ ಸಂಗೀತದ ಭಾವಗೀತೆಯನ್ನು ಕೇಳದ ಕನ್ನಡಿಗರಿಲ್ಲ ! ಈ ಕವನವನ್ನು ರಚಿಸಿದವರೆ ನವೋದಯ ಕವಿ ಡಾ|| ಸಾ.ಶಿ. ಮರುಳಯ್ಯನವರು. ಇಷ್ಟೇ ಅಲ್ಲ ಅವರೇ ಮಾತಿನ ಮೋಡಿಗಾರ ಮರುಳಯ್ಯನವರು.
ಲಕ್ಷಾಂತರ ಜನರಿರುವ ಸಭೆಗಳಲ್ಲಾಗಲಿ, ತುಂಬಿತುಳುಕುವ ವಿದ್ಯಾರ್ಥಿಗಳ ತರಗತಿಗಳಲ್ಲಾಗಲಿ, ಮರುಳಯ್ಯನವರು ಮಾತನಾಡಲು ಎದ್ದು ನಿಂತರೆ, ಇಡೀ ಅಭೆ ನಿಶ್ಯಬ್ದ. ಅವರ ಪಾಂಡಿತ್ಯಪೂರ್ಣ ವೈಚಾರಿಕ ಮಾತುಗಳಿಗಾಗಿ ಜನ ಕಾದು ಕುಳಿತಿರುತ್ತಿದ್ದರು. ಅವರದು ವಿದ್ವತ್ಪೂರ್ಣ ವಾಗ್ಝರಿ! ವಸ್ತು ನಿಷ್ಠ ವಿಚಾರ ಮಂಡನೆ. ಅವರ ಶಿಸ್ತು ಬದ್ಧ ತರಗತಿಗಳಿಗೆ ಇತರೆ ತರಗತಿಯ ವಿದ್ಯಾರ್ಥಿಗಳು ಬಂದು ಕುಳಿತಿರುತ್ತಿದ್ದರು.
ಕೆಂಪು ಬಣ್ಣದ ತೆಳು ಶರೀರ, ದುಂಡು ಮುಖ, ಬೈತಲೆ ಸಮತಟ್ಟಾದ ನಿಲುವು, ಬಿಳಿ ಷರಟು, ಕರಿ ಪ್ಯಾಂಟು, ನಗು ಮುಖ. ಸದಾ ಸಮಸ್ಥಿತಿಯ ವ್ಯಕ್ತಿತ್ವ ಮರುಳಯ್ಯನವರದು.
" ವಿದ್ಯಾ ದದಾತಿ ವಿನಯಂ " ಎಂಬ ಮಾತಿಗೆ ಅವರೊಂದು ಉತ್ತಮ ಉದಾಹರಣೆ. ಸುಸಂಸ್ಕೃತ ಸ್ನೇಹಜೀವಿ, ಸಂವೇದನಾಶೀಲ ಕವಿ, ವಸ್ತುನಿಷ್ಠ, ವಿಮರ್ಶಕ, ಬಹುಮುಖ ಪ್ರತಿಭೆ. ನಾಡುನುಡಿ ಸೇವಕ ಸ್ವಾತಂತ್ರ್ಯ ಹೋರಾಟಗಾರ, ನಾಟಕಗಾರ, ಪತ್ರಿಕೋದ್ಯಮಿ, ಅಪ್ರತಿಮ ಸಂಘಟಕ.
ಮಾನವತೆಯನ್ನು ಮೈಗೂಡಿಸಿಕೊಂಡವರು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. 80ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ರಚಿಸಿ, ಸಿದ್ಧಿ ಸಾಧನೆಯಲ್ಲಿ ಮೇರು ಪರ್ವತವಾಗಿದ್ದವರು ಪ್ರೊ.ಸಾ.ಶಿ. ಮರುಳಯ್ಯ.